 ಜನಪದ ಶಿಲ್ಪ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಜನಪದ ಶಿಲ್ಪವೆಂದರೆ ಯಾವುದು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸುವುದು ಕಷ್ಟಸಾಧ್ಯ. ಅದರ ಹರಹಿನ ಸೀಮೆ, ಲಕ್ಷಣ ಇತ್ಯಾದಿಗಳನ್ನು ನಿರೂಪಿಸುವ ಪ್ರಯತ್ನವನ್ನು ಹಲವು ವಿದ್ವಾಂಸರು ಮಾಡಿರುವರಾದರೂ ಈ ವಿಷಯದಲ್ಲಿ ಒಮ್ಮತ ಇನ್ನೂ ಮೂಡಿಲ್ಲ. ಘನವಸ್ತುಗಳಿಂದ ಆಕೃತಿಗಳನ್ನು ಮೂಡಿಸುವ ಶಿಲ್ಪಕಲೆ ನಿತ್ಯಜೀವನ ನಿರ್ವಹಣೆಯ ಅತ್ಯಾವಶ್ಯಕತೆಗಳಿಂದ ಹೊರಗಿರುವ ಒಂದು ವ್ಯಾಪಾರ. ಇದರ ನೆಲೆ ಇರುವುದು ಮಾನವನ ಸೃಷ್ಟ್ಯಾತ್ಮಕ ಮನೋವಾಂಛೆಯಲ್ಲಿ. ಹೊಸದನ್ನು ಸೃಷ್ಟಿಸಬೇಕೆಂಬ ಆಸಕ್ತಿ ನಾನಾಸ್ತರಗಳಲ್ಲಿ ಅಂದರೆ ಕೆಲವು ಬಾರಿ ಸೌಂದರ್ಯಾನುಭವಕ್ಕೆ ಪ್ರೋತ್ಸಾಹಕವಾಗಿ, ಹಲವು ಬಾರಿ ಧರ್ಮ, ಅಂತಸ್ತಿನ ಪ್ರಜ್ಞೆ, ವಿನೋದ ಮುಂತಾದ ಮನೋರಂಗದ ಇತರ ವ್ಯಾಪಾರಗಳಿಗಾಗಿ ಉಪಯೋಗವಾಗುತ್ತದೆ. ಈ ಧೋರಣೆಗಳು ಮಾನವನ ಎಲ್ಲ ವರ್ಗ-ಸ್ತರಗಳಲ್ಲೂ ಕಲಾನಿರ್ಮಾಣದ ನೆಲಗಟ್ಟಾಗಿ ಕಾಣಿಸುವುದರಿಂದ, ಧೋರಣೆಯ ಆಧಾರದ ಮೇಲೆ ಜನಪದ ಶಿಲ್ಪ ಯಾವುದು, ಅದು ಅಲ್ಲದ್ದು ಯಾವುದು ಎಂಬುದನ್ನು ನಿರ್ಧರಿಸಲಾಗುವುದಿಲ್ಲ.

	ಪರಂಪರಾನುಗಣತೆ, ಅಲಿಖಿತತೆ, ಇತ್ಯಾದಿ ಜನಪದದ ಇತರ ರಂಗಗಳಲ್ಲಿ ಉಪಯೋಗಿಸುವ ಮಾನದಂಡಗಳು, ಕಲಾರಂಗದಲ್ಲಿ (ಅದರಲ್ಲೂ ಶಿಲ್ಪದಲ್ಲಿ) ಅರ್ಥಹೀನವಾಗುತ್ತವೆ. ಎಲ್ಲ ಕೆಲಗಳೂ ಅವು ಆದಿವಾಸಿಗಳದ್ದಾಗಿರಲಿ ಬಹುಜನವರ್ಗದ್ದಾಗಿರಲಿ, ನಾಗರಿಕ ವರ್ಗಗಳಾದ್ದಾಗಿರಲಿ, ಪರಂಪರಾಗತವೇ. ಬಹುಮಟ್ಟಿಗೆ ಪೂರ್ವಾನುಭವ ಮತ್ತು ವಾಸನೆಗಳು ಇವುಗಳ ರೂಪನಿರ್ದೇಶ ಮಾಡುತ್ತವೆ. ಶಿಲ್ಪ ಮೂಲತಃ ವೃತ್ತಿಜನ್ಯವಾದುದರಿಂದ, ಇದರ ಸೃಷ್ಟಿಗೆ ಲಿಖಿತಶಾಸ್ತ್ರಗಳ ಉಪಯೋಗ ಅಲ್ಪ; ಇದು ಬಹುಮಟ್ಟಿಗೆ ಗುರು-ಶಿಷ್ಯ ಪರಂಪರೆಯಲ್ಲಿ ಕಲಿಕೆ ಅನುಭವದ ಸೂತ್ರದ ಮೇಲೆ ಮುಂದುವರಿಯುತ್ತದೆ.	
ಜನಪದ ಸಮಾಜಗಳಲ್ಲಿ ಪ್ರಚಲಿತವಾಗಿರುವ ಶಿಲ್ಪ ಜನಪದ ಶಿಲ್ಪ ಎಂಬ ವಿವರಣೆ ಸಾಧುವಾಗಿ ಕಂಡರೂ ಶಿಲ್ಪಗಳ ಆಳ ಅಧ್ಯಯನಕ್ಕೆ ತೊಡಗಿದಾಗ ಈ ವಿವರಣೆ ಅನಿರ್ದಿಷ್ಟವಾಗುತ್ತದೆ. ಜನಪದದಂಥ ತೆರೆದ ಸಮಾಜದಲ್ಲಿ ಹಲವಾರೆಡೆಗಳಿಂದ ಬಂದ ಅನುಭವ, ಜ್ಞಾನ ಮತ್ತು ವಿಧಾನಗಳು ತಮ್ಮದೆ ಆದ ಮಾರ್ಗದಲ್ಲಿ ರೂಪುಗೊಂಡು ಜನಪದದ ಸ್ವತ್ತಾಗಿ ಹೋಗುತ್ತವೆ. ಹೊರಪ್ರಪಂಚದ ಸಾಂಸ್ಕøತಿಕ ಪ್ರಭಾವಗಳ ಸೊಂಕಿಲ್ಲದೆಯೇ ಕೆಲವು ವೇಳೆ ಅವನ್ನು ಪ್ರತಿಭಟಿಸಿಯೋ ನಿಂತ ಸಂಕುಚಿತ ಪ್ರದೇಶದಲ್ಲಿ ಚಿಕ್ಕ ಸಮೂಹಗಳಲ್ಲಿ ವಾಸಿಸುವ ಆದಿವಾಸಿ ಜನಾಂಗಗಳಲ್ಲಿ ಗಾಢವಾಗಿ ಕಾಣುವ ವೃತ್ತಿ, ವಿಧಾನ, ಕಲ್ಪನೆ, ಇತ್ಯಾದಿಗಳೂ ಮೂಲತಃ ಈ ವರ್ಗಗಳನ್ನೇ ಹಿನ್ನೆಲೆಯಾಗಿ ಹೊಂದಿರುವ ಜನಪದ ವರ್ಗಗಳಲ್ಲೂ ಕಂಡು ಬರುವುದರಿಂದ, ಆದಿವಾಸಿ ಶಿಲ್ಪಗಳ ಮತ್ತು ಜನಪದ ಶಿಲ್ಪಗಳ ನಡುವಿನ ವಿಭಜನ ರೇಖೆಯನ್ನು ಸ್ಪಷ್ಟವಾಗಿ ಗುರುತಿಸಲಾಗುವುದಿಲ್ಲ. ಭಾರತದ ಭಿಲ್ಲರೇ ಮೊದಲಾದ ಆದಿವಾಸಿ ಜನಾಂಗಗಳು ತಮಗೆ ಅವಶ್ಯವಾದ ಶಿಲ್ಪ ನಿರ್ಮಾಣಕ್ಕೆ ಪಕ್ಕದ ಗ್ರಾಮೀಣ ಕಲೆಗಾರರನ್ನೇ ಅವಲಂಬಿಸಿರುತ್ತಾರಾಗಿ ಇಂಥ ಸಂದರ್ಭಗಳಲ್ಲಿ ಆದ ನಿರ್ಮಾಣಗಳು ಜನಪದದ್ದೋ ಆದಿವಾಸಿಗಳದೋ ಎಂದು ಹೇಳುವುದು ಅಸಾಧ್ಯವಾಗುತ್ತದೆ. ನಾಗರಿಕ ಸಮಾಜಗಳ ಕೆಲವೊಂದು ಭಾವನೆಗಳು ಸ್ವಲ್ಪಸ್ವಲ್ಪವಾಗಿ ಜನಪದ ವರ್ಗಗಳಿಗೆ ಹರಿಯುವ ಸತತಕ್ರಿಯೆಯಿಂದಾಗಿ ಹಲವಾರು ನಾಗರಿಕ ಮೂಲದ ಶಿಲ್ಪಗಳು ಅಥವಾ ಅವುಗಳ ಬಡ ಅನುಕರಣೆಗಳು ಜನಪದ ಶಿಲ್ಪಗಳಾಗಿಯೇ ಕಾಣಿಸಿಕೊಳ್ಳುತ್ತವೆ. ಇವೆಲ್ಲ ಜನಪದ ಶಿಲ್ಪದ ಸ್ಪಷ್ಟ ಸೀಮೆಯನ್ನು ನಿರ್ಧರಿಸುವಲ್ಲಿ ಹಲವು ತೊಂದರೆಗಳನ್ನು ಒಡ್ಡುತ್ತವೆ.

	ಮೂಲ ಮತ್ತು ರೂಪ ಯಾವುದೇ ಆದರೂ ಜನಪದದ ಸಮಾಜಗಳಲ್ಲಿ ಪ್ರಚಲಿತವಾಗಿರುವ ಕೆಲವು ಸಾಮಾನ್ಯಾಂಶಗಳನ್ನು ಗಮನಿಸಬಹುದು. ಮೊದಲನೆಯದಾಗಿ, ಜನಪದದ ಸರಳ ಮನೋಭೂಮಿಕೆಗೆ, ಆರ್ಥಿಕಸ್ಥಿತಿಗೆ ಒಗ್ಗುವ ಸರಳತೆ ಜನಪದ ಶಿಲ್ಪಗಳ ಮುಖ್ಯ ಅಂಶ. ಸಾಮಗ್ರಿ, ತಂತ್ರ ಮತ್ತು ನಿರೂಪಣೆಯ ರಂಗಗಳಲ್ಲಿ ಈ ಸರಳತೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಮಣ್ಣು, ಕಲ್ಲು, ಮರ, ಮರದ ಹೊಟ್ಟು, ಹಿತ್ತಾಳೆ ಮುಂತಾಗಿ ಆಯಾ ಪ್ರದೇಶಗಳಲ್ಲಿ ಸುಲಭವಾಗಿ ದೊರಕುವ ಸಾಮಗ್ರಿಗಳನ್ನಷ್ಟೇ ಶಿಲ್ಪಗಳ ತಯಾರಿಕೆಯಲ್ಲಿ ಬಳಸಲಾಗಿರುತ್ತದೆ. ಅತ್ಯಲಂಕರಣ ವಿಧಾನ, ಕ್ಲಿಷ್ಟ ತಂತ್ರಗಳು ಮುಂತಾದ ನಾಗರಿಕ ಶಿಲ್ಪವಿಧಾನಗಳು ಇಲ್ಲಿಲ್ಲ. ನಿರೂಪಣೆಯಲ್ಲಿ ಆಯಾ ಶಿಲ್ಪಗಳಿಗೆ ಸಂಬಂಧಿಸಿದ ಮುಖ್ಯ ಭಾವನೆಗಳ ಅಭಿವ್ಯಕ್ತಿ ಶಿಲ್ಪದ ಗುರಿಯಾಗಿರುತ್ತದೆಯೇ ಹೊರತು, ಯಥಾಸ್ಥಿತಿಯ ಸಮಗ್ರ ಪ್ರತಿರೂಪೀಕರಣ ಅಥವಾ ಅತಿಚತುರ ನಿರೂಪಣಾವಿಧಾನಗಳು ಇವುಗಳಲ್ಲಿ ಇರುವುದಿಲ್ಲ. ಎರಡನೆಯದಾಗಿ, ಕಲೆಗಾಗಿ ಕಲೆ ಸೃಷ್ಟಿ ಮಾಡಬೇಕೆಂಬ ಕಲೆಗಾರನ ಮನಸ್ಸಿನ ಒತ್ತಡದಿಂದ ಹುಟ್ಟಿದ ಕಲೆ ಮುಂತಾಗಿ ನಾಗರಿಕ ಕಲಾಸೃಷ್ಟಿಗಳಲ್ಲಿ ಕಂಡುಬರುವ, ಶಿಲ್ಪಿಯೇ ಕೇಂದ್ರವಾಗುಳ್ಳ, ಹಿನ್ನಲೆ ಜನಪದ ಶಿಲ್ಪಸೃಷ್ಟಿಯಲ್ಲಿ ಇರುವುದಿಲ್ಲ. ಇಲ್ಲಿ ಶಿಲ್ಪಿಗಿಂತಲೂ ಶಿಲ್ಪಗಳನ್ನು ಉಪಯೋಗಿಸುವವರ ದೃಷ್ಟಿ, ಆವಶ್ಯಕತೆಗಳೇ ಶಿಲ್ಪ ಸೃಷ್ಟಿಯ ಚೇತನ. ಯಾರಿಗಾಗಿ ಕಲೆ ನಿರ್ಮಾಣವಾಗುತ್ತದೆಯೋ ಆ ಜನಪದವೇ ಜನಪದ ಶಿಲ್ಪದ ಜೀವಾಳ (ಅಂದ್ರೆ ಮಾಲ್ರೋ). ಶಿಲ್ಪಿ ಹೆಚ್ಚು ಕಡಿಮೆ ಕಸಬುಗಾರ, ಮೇಲಿನದಕ್ಕೆ ಹೊಂದಿಕೊಂಡಂತೆ ಬರುವ ಮೂರನೆಯ ಅಂಶವೆಂದರೆ ಈ ಜನಪದ ಶಿಲ್ಪಗಳು ಕೇವಲ ಕಲಾಕೃತಿಗಳಾಗಿರದೆ, ಅವು ಹೆಚ್ಚು ಮಟ್ಟಿಗೆ ಯಾವುದೋ ಸಾಮಾಜಿಕ ಉದ್ದೇಶಗಳಿಗಾಗಿ. (ಉದಾ, ಧರ್ಮ, ಮಾಟ, ವಿನೋದ) ರೂಪಿಸಲಾಗಿರುತ್ತದೆ. ಇಲ್ಲಿ ಕಲೆ ಉಪಯೋಗಾತ್ಮಕ. ನಾಲ್ಕನೆಯದಾಗಿ, ಜನಪದ ಶಿಲ್ಪಗಳಲ್ಲದಿದ್ದರೂ ಶಿಲ್ಪ ಸ್ವರೂಪಗಳು ಬಹುಕಾಲ ಮುಂದುವರಿಯುತ್ತಿರುತ್ತವೆ. ಸಂಪ್ರದಾಯಾತ್ಮಕ ಸಮೂಹ ಪ್ರಜ್ಞೆ ಇವುಗಳ ರಕ್ಷೆ, ನವಸೃಷ್ಟ್ಯಾತ್ಮಕ ವ್ಯಕ್ತಿ ಪ್ರಜ್ಞೆಗೆ ಇಲ್ಲಿ ಸಾಕಷ್ಟು ಸ್ಥಳವಿಲ್ಲ.	

ಜನಪದ ಕಲೆಯ ಅಧ್ಯಯನದಲ್ಲಿ ಸಾಕಷ್ಟು ಕೆಲಸ ಮಾಡಿರುವ ಜೋಸೆಫ್ ವ್ಯದ್ರ ಎಂಬ ವಿದ್ವಾಂಸ ಸಹ ಶಿಲ್ಪಿಗಿಂತಲೂ ಶಿಲ್ಪಗಳನ್ನು ಉಪಯೋಗಿಸುವ ಮಂದಿಯ ಮನೋಭಾವ, ದೃಷ್ಟಿ ಮತ್ತು ಉದ್ದಿಶ್ಯದ ಗಾಢ ಪ್ರಭಾವ ಜನಪದ ಶಿಲ್ಪಸೃಷ್ಟಿಯಲ್ಲಿರುವುದನ್ನು ಒತ್ತಿ ಹೇಳುತ್ತಾನೆ. ಅವರ ಪ್ರಕಾರ ಆ ಪ್ರಭಾವದಿಂದಾಗಿ ಶಿಲ್ಪಗಳು ಯಾವ ವರ್ಗದ ಜನರಿಗಾಗಿ ಸ್ಪಷ್ಟಿಸಲಾದುವೋ ಆ ಜನಗಳ ಸುಲಭ ಗ್ರಹಣೆಗೆ ಅನುಕೂಲವಾಗುವ ರೀತಿಯಲ್ಲಿ ನಿರೂಪಿತವಾಗಿರುತ್ತವೆ. ಜನರಿಗೆ ಪರಿಚಯವಿರುವ ನೈಸರ್ಗಿಕ ವಿನ್ಯಾಸಗಳು, ವಿಷಯ ಒಮ್ಮೆಯೇ ಮನನಾಟುವ ನೇರವೂ ಹರಿತವೂ ನಾಟಕೀಯವೂ ಆದ ರೂಪಣಾ ವಿಧಾನಗಳು ಇವುಗಳಲ್ಲಿ ಬಳಕೆಯಾಗಿರುತ್ತವೆ. ಈ ಸಮಾಜದಿಂದ ಹೊರಗಿರುವವರಿಗೆ ಸುಲಭವಾಗಿ ಅರ್ಥವಾಗದ, ಹಲವು ಚಿಹ್ನಾತ್ಮಕ ವಿನ್ಯಾಸಗಳು ಒಮ್ಮೊಮ್ಮೆ ಕಂಡುಬಂದರೂ ಅವು ಕಾಲಾನುಕಾಲದಿಂದ ಪರಂಪರೆಯಲ್ಲಿ ಬೆಳೆದು ಬಂದವಾಗಿದ್ದು, ಜನಪದ ಮಂದಿಗೆ ಅವು ಸುಲಭವಾಗಿ ಅರ್ಥವಾಗುತ್ತವೆ. ವ್ಯದ್ರನ ಪ್ರಕಾರ ಆಕಾಶತತ್ತ್ವ ಅಥವಾ ತಾವಿನ ಭಾವನೆ. ಅಂದರೆ ಶಿಲ್ಪನಿರೂಪಣೆಯಲ್ಲಿ ವಸ್ತುಗಳನ್ನು ಹಿಂದೆಮುಂದೆ, ಅಡ್ಡ ಉದ್ದವಾಗಿ, ಚಿಕ್ಕ ದೊಡ್ಡದಾಗಿ ನಿರೂಪಿಸಿ ಯಥಾದೃಷ್ಟಿಯನ್ನು ತರುವ ತಂತ್ರಜನಪದ ಶಿಲ್ಪಗಳಲ್ಲಿ ಇರುವುದಿಲ್ಲ. ಅಲ್ಲದೆ ಅಲಂಕರಣಾದಿ ವಿವರಗಳ ಅಳವಡಿಕೆಯಿಂದ ವಸ್ತುವಿನ ಮೂಲ ಸ್ವರೂಪದ ಭಾವನೆಯನ್ನು ನಿರೂಪಿಸುವ ತಂತ್ರ ಇಲ್ಲಿರುವಂತೆಯೇ ಹೊರತು, ಮೂಲವಸ್ತುವನ್ನು ಕೇಂದ್ರೀಕರಿಸಿ ಅಲಂಕರಣಗಳಿಂದ ಪ್ರಭಾವಯುತವಾಗಿ ಮಾಡುವ ನಾಗರಿಕ ಶಿಲ್ಪಗಳ ತಂತ್ರ ಕಾಣುವುದಿಲ್ಲ. ಇವುಗಳಲ್ಲಿ ಹಲವು ಅಭಿಪ್ರಾಯಗಳು ವಿವಾದಾಸ್ಪದವಾಗಿವೆ. ಮೂಲವಸ್ತುವಿನ ಹೊರಪ್ರಾಕಾರದ ಉಪಾಂಶಗಳು ಶಿಲ್ಪ ನಿರೂಪಣೆಯಲ್ಲಿ ಅಷ್ಟೇನೂ ಮುಖ್ಯವಲ್ಲ. ಜನಪದ ಶಿಲ್ಪಗಳಲ್ಲಿ ನಿಸರ್ಗ ಸಹಜರೂಪಗಳ ಸತ್ತ್ವವಷ್ಟೇ ನಿರೂಪಿತವಾಗುವುದರಿಂದ ಇತರ ಅಂಶಗಳು ನೋಡುಗನ ಚಿತ್ತದಲ್ಲಿ ತಾವಾಗಿಯೇ ಕೂಡಿಕೊಳ್ಳುತ್ತವೆ. ತಾವಿನ ಭಾವನೆ ಒಂದಲ್ಲ ಒಂದು ರೀತಿ ಸ್ವಪ್ರಕಟನಾ ಶಕ್ತಿಯುಳ್ಳದ್ದು ; ಅಲ್ಲದೆ ಜನಪದ ಶಿಲ್ಪ ಹಲವು ಬಾರಿ ಕಲ್ಪನಾ ರಂಗದ ವಸ್ತು ಕಥೆಗಳನ್ನು ನಿರೂಪಿಸುವುದರಿಂದ ಯಥಾದೃಷ್ಟಿ ನಿರೂಪಣೆಗಿಂತ ಕಲ್ಪನಾರಂಗದ ಕೆಲಸವೇ ಇಲ್ಲಿ ಹೆಚ್ಚು -ಇತ್ಯಾದಿ ಕಾರಣಗಳಿಂದ ವ್ಯದ್ರನ ಕೆಲವೊಂದು ಊಹೆಗಳನ್ನು ವಿದ್ವಾಂಸರು ಒಪ್ಪುವುದಿಲ್ಲ.

	ಮತ್ತಷ್ಟು ವ್ಯವಸ್ಥಿತ ಅಧ್ಯಯನ ನಡೆಸಿರುವ ಕಾನ್ರಾಡ್ ಹ್ಯಾಮ್ನ ಪ್ರಕಾರ ಜನಪದ ಶಿಲ್ಪಗಳಲ್ಲಿ ನೈಸರ್ಗಿಕ ಚಿತ್ರಣ ಅಂದರೆ ಯಥಾಸ್ಥಿತಿ ನಿರೂಪಣೆ ಇರುವುದಿಲ್ಲ. ಇಲ್ಲಿ ಇರುವುದು ಅವುಗಳ ತತ್ತ್ವ ವ್ಯಾಖ್ಯೆ ಮಾತ್ರ ; ತತ್ತ್ವದ ಹೊರಗಿನ ಎಲ್ಲ ಅಂಶಗಳೂ ಇಲ್ಲಿ ಗೌಣವಾಗುತ್ತವೆ. ಉದಾಹರಣೆಗೆ ಒಬ್ಬ ಸಂತನನ್ನು ನಿರೂಪಿಸುವಲ್ಲಿ ಸಂತತ್ವವನ್ನು ತೋರಿಸುವ ಅವನ ಪರಿಕರಗಳು ಮುಖ್ಯವಾಗುತ್ತವೆಯೇ ಹೊರತು ಸಂತನ ಅಂಗಾಂಗವಿವರಗಳನ್ನೊಳಗೊಂಡ ಪ್ರತಿರೂಪವಲ್ಲ. ಹ್ಯಾಮ್‍ನ ಅಧ್ಯಯವನ್ನು ಮುಂದುವರಿಸಿ ತೋಷಿ ಎಂಬ ವಿದ್ವಾಂಸ ಜನಪದ ಕಲೆಯ (ಶಿಲ್ಪಗಳೂ ಸೇರಿದಂತೆ) ಲಕ್ಷಣಗಳನ್ನು ಈ ರೀತಿ ಪಟ್ಟಿ ಮಾಡಿದ್ದಾನೆ. 1 ಎಲ್ಲ ರೀತಿಯ ಹೆಚ್ಚಿನ ವಿವರಗಳನ್ನೂ ಕೈಬಿಟ್ಟು ಕೆಲವೇ ನಿರ್ದಿಷ್ಟ ಗೆರೆ, ಆಕಾರಗಳಿಂದ ಶಿಲ್ಪ ಭಾವವನ್ನಷ್ಟೇ ಒಗ್ಗೂಡಿಸುವುದು. 2. ವರ್ಣಚ್ಚೇದ, ವರ್ಣಸಾಂದ್ರ ವ್ಯತ್ಯಾಸ ಮುಂತಾದ ಕ್ಲಿಷ್ಟ ತಂತ್ರಗಳನ್ನು ಬಳಸದೆ, ಗೆರೆ, ಬಣ್ಣ, ಗಾತ್ರಗಳ ಸಂಯೋಜನೆಯಿಂದ ಸುಲಭವಾಗಿ ನಿರೂಪಿಸುವುದು. 3. ಕೆಲವೊಂದು ಸಂದರ್ಭಗಳಲ್ಲಿ ನೋಡುಗನ ದೃಷ್ಟಿ ಒಂದು ವಸ್ತುವಿನ ಮೇಲೆ ಕೇಂದ್ರೀಕೃತವಾಗುವಂತೆ ಮಾಡಲು ಅವನ್ನು ಅಸ್ವಾಭಾವಿಕವಾಗಿ ವಿಪರೀತ ದೊಡ್ಡದಾಗಿ ನಿರೂಪಿಸುವುದು (ಉದಾಹರಣೆಗೆ ರಾಜನನ್ನು ಬಹಳ ದೊಡ್ಡದಾಗಿ ನಿರೂಪಿಸಿ, ಪರಿವಾರದವರನ್ನು (ಗಿಡ್ಡಾಗಿ ತೋರಿಸುವುದು). 4. ಚಲನೆ, ಧ್ವನಿ, ಮನೋವ್ಯಾಪಾರ ಮತ್ತು ಭಾವನೆಗಳಿಗೆ ಆಕಾರವನ್ನು ಕೊಡುವುದು. 5. ಅನೇಕ ಸಾಮಾನ್ಯ ರೂಪಗಳನ್ನು, ಕಾಲ್ಪನಿಕ ರೀತಿಯಲ್ಲಿ ಪರಿವರ್ತಿಸಿ, ಅವುಗಳ ಒಗ್ಗೂಡಣೆ ಅಲಂಕರಣವನ್ನು ಸಾಧಿಸುವುದು. 6 ಗೆರೆಗಳು, ರೂಪಗಳು ಅಥವಾ ವರ್ಣತಾವುಗಳನ್ನು ನಿರ್ದಿಷ್ಟವಾಗಿ ಹಲವು ಬಾರಿ ನಿರೂಪಿಸುವುದು. 	
ಜನಪದ ಶಿಲ್ಪದ ಅಧ್ಯಯನ ಹಲವು ದೇಶಗಳಲ್ಲಿ ಇನ್ನೂ ಶೈಶವಾಸ್ಥೆಯಲ್ಲಿದೆಯಾಗಿ, ಯೂರೋಪಿನ ಮಾಹಿತಿಯ ಆಧಾರದ ಮೇಲೆ ಮಾಡಿರುವ ತೋಷಿಯ ವಿಶ್ಲೇಷಣೆ ಇತರೆಡೆಗಳಿಗೂ ಅನ್ವಯಿಸಬಹುದೆ ಎಂಬುದು ತಿಳಿಯಲಾಗುವುದಿಲ್ಲ. ಜನಾಂಗಶಾಸ್ತ್ರಜ್ಞರು, ಜಾನಪದ ವಿದ್ವಾಂಸರು ಮತ್ತು ಕಲಾ ಇತಿಹಾಸಕಾರರ ಸಂಯುಕ್ತ ಅಧ್ಯಯನ ಈ ದಿಕ್ಕಿನಲ್ಲಿ ಇನ್ನೂ ಹೆಚ್ಚು ಬೆಳಕನ್ನು ಚೆಲ್ಲಬಹುದು.

	ಯೂರೋಪಿನಲ್ಲಿ ಇಂದು ಮುಖ್ಯವಾಗಿ ಜನಪದ ಮತ್ತು ನಾಗರಿಕ ಕಲಾ ಸಂಪ್ರದಾಯಗಳಷ್ಟೇ ಕಂಡುಬರುವುದರಿಂದ, ಇಲ್ಲಿ ಆದಿವಾಸೀ ಕಲೆಯ ಪ್ರಭಾವವನ್ನು ಗುರುತಸಿಲಾಗುವುದಿಲ್ಲ. ಹೆಚ್ಚು ಮಟ್ಟಿಗೆ ಹಲವಾರು ಚಾರಿತ್ರಿಕ ಘಟ್ಟಗಳಲ್ಲಿ ಬೆಳೆದ ನಾಗರಿಕ ಶಿಲ್ಪ ರೀತಿಗಳೇ ಜನಪದದಲ್ಲಿ ಉಳಿದು ಕೊಂಡಿವೆ ಎಂದು ವಿದ್ವಾಂಸರ ಊಹೆ. ಆಫ್ರಿಕ, ಅಮೆರಿಕ ಸ್ವಲ್ಪ ಮಟ್ಟಿಗೆ ಭಾರತಗಳ ಜನಪದ ಕಲೆಯ ಹಿನ್ನಲೆಯಲ್ಲಿ ನೋಡುವುದಾದರೆ ಯೂರೋಪಿನವು ನಾಗರಿಕ ವರ್ಗಕ್ಕೆ ಸೇರುವಂತೆ ಕಂಡರೂ ಅಲ್ಲಿಯ ವಿದ್ವಾಂಸರ ಪ್ರಕಾರ ಆ ಪ್ರದೇಶದ ಜನಪದದಲ್ಲಿ ರೂಢಿತವಾಗಿರುವ ಶಿಲ್ಪಗಳೆಲ್ಲ ಜನಪದ ಶಿಲ್ಪಗಳೇ, ಅಲ್ಲಿ ಕಲ್ಲು, ಮಣ್ಣು, ಮರ, ದಂತವಲ್ಲದೆ ಕಬ್ಬಿಣ, ಪೋರ್ಸಲಿನ್, ಗಾಜು ಇತ್ಯಾದಿ ಪರಿಷ್ಕøತ ಪದಾರ್ಥಗಳಿಂದ ಮಾಡಿದ ಕಲಾಕೃತಿಗಳೂ ಜನಪದ ಶಿಲ್ಪದಲ್ಲಿ ಸೇರುತ್ತವೆ. ಈ ಅಂಶವನ್ನೂ ಹಿಂದಿನ ವಿಶ್ಲೇಷಣೆಯಲ್ಲಿ ಹೇಳಿರುವ ಹಲವು ಅಂಶಗಳನ್ನೂ ಯೂರೋಪಿನ ಜನಪದ ಶಿಲ್ಪದ ಎರಡು ಉದಾಹರಣೆಗಳಿಂದ ನೋಡಬಹುದು. ಮುಂದಿನ ಚಿತ್ರದಲ್ಲಿರುವುದು ಸ್ಪೇನಿನ ಒಂದು ವಸ್ತು ಸಂಗ್ರಹಾಲದಯಲ್ಲಿರುವ ಕ್ರಿಸ್ತನನ್ನು ಶಿಲುಬೆಗೇರಿಸಿರುವ ಶಿಲ್ಪ ; ನಾಡುಕಬ್ಬಿಣದಿಂದಾದದ್ದು. ಇಲ್ಲಿನ ಕಲಾವಸ್ತು ಕ್ರೈಸ್ತ ಪುರಾಣಗಳದ್ದು. ನಿರೂಪಣೆ ಸರಳವಾದರೂ ಪರಿಣಾಮಕಾರಿಯಾಗಿದೆ. ಶಿಲುಬೆಯಲ್ಲಿ ಅನೇಕ ಭರ್ಜಿಮೊನೆಗಳನ್ನು ಮೂಡಿಸಿ, ಭಯದ ಆವರಣವನ್ನು ಸೃಷ್ಟಿಸಲಾಗಿದೆ. ಯೇಸು ನಿಸ್ಸಹಾಯಕನಾಗಿದ್ದರೆ, ಪಕ್ಕದವರು ಅದನ್ನು ಗಮನಿಸದೆ ಮೊಳೆ ಹೊಡೆಯುವ ತಮ್ಮ ಕಾರ್ಯದಲ್ಲಿ ಮಗ್ನರಾಗಿರುವ ರೀತಿ, ನೋಡುಗನ ಮೇಲೆ ಅಸಾಧಾರಣ ಪ್ರಭಾವವನ್ನು ಬೀರುತ್ತದೆ. ಕರುಣೆಯನ್ನು ಉಕ್ಕಿಸುತ್ತದೆ. ಶಿಲ್ಪದ ಉದ್ದಿಷ್ಟಭಾವವನ್ನು ನಿರೂಪಿಸುವುದೇ ಇದರ ಮುಖ್ಯ ಕಾರ್ಯವಾಗಿದ್ದು, ಕ್ರಿಸ್ತನ ಅಥವಾ ಮೊಳೆ ಹೊಡೆಯುವವರ ದೈಹಿಕ ವಿವರಗಳನ್ನು ಇಲ್ಲಿ ತೋರಿಸದಿರುವುದನ್ನು ಗಮನಿಸಬೇಕು. ಕ್ರೈಸ್ತರಲ್ಲಿ ಶಿಲುಬೆಗೆ ಬಹುಪ್ರಾಶಸ್ತ್ಯವಿದೆ. ಶಿಲುಬೆ ಕೇವಲ ಒಂದು ವಸ್ತುವಾದರೂ ಅದು ಕ್ರೈಸ್ತ ಪರಂಪರೆಯಲ್ಲಿ ಬೆಳೆದವರ ಮನೋರಂಗದಲ್ಲಿ ಹಲವಾರು ಸೂಕ್ಷ್ಮಭಾವನೆಗಳನ್ನು ಎಬ್ಬಿಸುವ ಶಕ್ತಿಯಾಗಿದೆ. ಅದ್ದರಿಂದಲೇ ಈ ಶಿಲ್ಪದಲ್ಲಿ ಯೇಸುವಿಗಿಂತಲೂ ಶಿಲುಬೆಯನ್ನು ಉತ್ಪ್ರೇಕ್ಷಿತ ಗಾತ್ರದಲ್ಲಿ ತೋರಿಸಿರುವುದು. ಯೇಸುವಿಗಿಂತಲೂ ಮೊಳೆ ಹೊಡೆಯುವವರನ್ನು ಚಿಕ್ಕ ಪ್ರಮಾಣದಲ್ಲಿ ರೂಪಿಸಿರುವುದು ಇವುಗಳ ಹಿನ್ನೆಲೆಯಲ್ಲಿನ ತಂತ್ರ. ತೋಷಿಯ ವಿಶ್ಲೇಷಣೆಯಲ್ಲಿ ಹೇಳಿರುವ ಹಲವಂಶಗಳನ್ನಿದು ಸ್ಪಷ್ಟಪಡಿಸುತ್ತದೆ. ರಾಣಿ ಹೆಲೆನ್ನಳ ಪ್ರತಿಕೃತಿಯಂತಿರುವ ಗಾಜಿನ ಶೀಷೆ ಜನಪದ ಶಿಲ್ಪಕ್ಕೆ ಇನ್ನೊಂದು ಉದಾಹರಣೆ, ಇದು ಪೂರ್ಣವಾಗಿ ಉಪಯೋಗಾತ್ಮಕ ವಸ್ತು. ನಿರೂಪಣೆಯಲ್ಲಿ ಅವಳ ರಾಜ್ಞಿತ್ವವನ್ನು ಮೂಡಿಸುವಂತೆ ಹಲವು ಆಭರಣಗಳನ್ನು ತೋರಿಸುವುದಾದರೂ ಅವುಗಳ ವಿವರ ರೂಪಣೆ ಇಲ್ಲ. ಭಾವವಷ್ಟೇ ಇಲ್ಲಿ ಮುಖ್ಯವಾಗಿದೆ.

	ಅಮೆರಿಕ ಖಂಡಗಳು, ಆಫ್ರಿಕ ಮತ್ತು ಏಷ್ಯದ ಹಲವು ಭಾಗಳಲ್ಲಿ ಆದಿವಾಸಿ ಜನಗಳ ಮನೋಧೋರಣೆ, ಸಂಪ್ರದಾಯ ಮತ್ತು ಕ್ರಿಯೆಗಳು ಬಹುಮಟ್ಟಿಗೆ ಮೂಲಸ್ಥಿತಿಯಲ್ಲಿ ಮುಂದುವರಿಯುತ್ತಿರುವುದರಿಂದಲೂ ಹಲವು ಪ್ರದೇಶಗಳಲ್ಲಿ ನಾಗರಿಕರಿಂದ ಪ್ರತ್ಯೇಕಿಸಬಹುದಾದ ಜನವರ್ಗಗಳಲ್ಲಿ ಇವರ ಸಂಖ್ಯೆಯು ಹೆಚ್ಚಾಗಿರುವುದರಿಂದಲೂ ಇಲ್ಲಿನ ಜನಪದ ಶಿಲ್ಪಗಳೆಂದರೆ ಹೆಚ್ಚು ಕಡಿಮೆ ಆದಿವಾಸಿ ಕಲೆಗಳೇ ಆಗುತ್ತವೆ. ಈ ಪ್ರದೇಶಗಳ ಶಿಲ್ಪಗಳಲ್ಲಿ ಸರಳತೆ, ನಿರ್ದಿಷ್ಟ ಭಾವ ನಿರೂಪಣೆಗಳ ಬಗ್ಗೆ ಹೆಚ್ಚಿನ ಗಮನ ಮತ್ತು ಪರಂಪರಾನುಗತ ಶಿಲ್ಪನಮೂನೆಗಳು ಬಹುಸಾಮಾನ್ಯ. ಹೆಚ್ಚಿನವು ಉಪಯೋಗಾತ್ಮಕವಾದುವು. ಉಪಕರಣಗಳನ್ನು ಕಲಾತ್ಮಕವಾಗಿ ಅಲಂಕರಿಸುವುದು, ಧರ್ಮ, ಮಾಟ ಇತ್ಯಾದಿ ಕ್ರಿಯೆಗಳಿಗೆ ಶಿಲ್ಪಗಳನ್ನು ಬಳಸುವುದು ರೂಢಿ. ಆಫ್ರಿಕದ ಕಾಂಗೋ ದೇಶದ ಮರದ ವಿಗ್ರಹಗಳು ಇಂಥವಕ್ಕೆ ಒಳ್ಳೆಯ ಉದಾಹರಣೆ. ಸೃಜನಾತ್ಮಕ ಫಲಶಕ್ತಿಯನ್ನು ನಿರೂಪಿಸುವುದು ಈ ಸ್ತ್ರೀ ವಿಗ್ರಹದ ಉದ್ದೇಶ. ಇದು ಒಬ್ಬ ಸ್ತ್ರೀಯ ಪ್ರತಿಕೃತಿಯಂತಿದ್ದರೂ ಸ್ತ್ರೀತ್ವದ ನಿರೂಪಣೆಗೆ ಇಲ್ಲಿ ಹೆಚ್ಚು ಗಮನವಿತ್ತಿರುವುದನ್ನು ಕಾಣಬಹುದು. ಇಲ್ಲಿ ವಿವರಗಳು ಸ್ವಲ್ಪಮಟಿಗೆ ಅಸಹಜವಾಗಿ, ಭಾವ ಮುಖ್ಯವಾಗಿದೆ. ಇದೇ ನಿರೂಪಣಾ ವಿಧಾನವನ್ನು (ಬಣ್ಣಹಾಕಿದ ಮರ, ಬಟ್ಟೆ ಮತ್ತು ನಾರಿನಿಂದ ಮಾಡಿದ) ರೌದ್ರತ್ವವನ್ನು ನಿರೂಪಿಸುವ ಲೈಬೀರಿಯದ ಮುಖವಾಡ ಮತ್ತು ಹವಾಯಿ ದ್ವೀಪದ ಒಂದು ವಿಗ್ರಹದಲ್ಲೂ ಸೃಷ್ಟಿಕ್ರಿಯೆಯನ್ನು ನಿರೂಪಿಸುವ ರುರುಟುವಿನ ಒಂದು ಮರದ ದೇವ ವಿಗ್ರಹದಲ್ಲೂ ಕಾಣಬಹುದು.

	ಭಾರತದಲ್ಲಿ ಜನಪದ ಶಿಲ್ಪದ ಅನೂಚಾನ ಸಂಪ್ರದಾಯವಿದೆ. ಮಣ್ಣು, ಮರ ಮರದ ಹೊಟ್ಟು, ಬಟ್ಟೆ ಕೆಲವು ಬಾರಿ ಹಿತ್ತಾಳೆ ಇಂಥ ಸುಲಭವಾಗಿ ದೊರೆಯುವ ವಸ್ತುಗಳು ಶಿಲ್ಪರಚನೆಗೆ ಇಲ್ಲಿ ಉಪಯೋಗದಲ್ಲಿವೆ. ಹೆಚ್ಚಿನ ಶಿಲ್ಪಗಳು ಧಾರ್ಮಿಕ ಅಥವಾ ಮಾಟ-ಮಂತ್ರಗಳಿಗೆ ಸಂಬಂಧಿಸಿದವು. ಕೆಲವು ಅಲಂಕರಣ, ಹಾಗೂ ವಿನೋದಕ್ಕಾಗಿ ಮಾಡಿದವೂ ಕಂಡುಬರುತ್ತವೆ. ಇವುಗಳ ನಿರೂಪಣೆಯಲ್ಲೂ ಸರಳತೆ ಮತ್ತು ವಿವರಕ್ಕಿಂತ ಭಾವಕ್ಕೆ ಹೆಚ್ಚಿನ ಗಮನ ಕೊಡಲಾಗಿದೆ. ನಾಗಾಲ್ಯಾಂಡಿನ ಕೋನ್ಯೂಕ್ ಆದಿವಾಸಿಗಳ ಒಂದು ಸ್ತ್ರೀವಿಗ್ರಹ ಮತ್ತು ದಂಪತಿ ವಿಗ್ರಹಗಳು ಇದಕ್ಕೆ ಒಳ್ಳೆಯ ಉದಾಹರಣೆಗಳು. ದಕ್ಷಿಣ ಭಾರತದ ಹಿತ್ತಾಳೆಯ ಒಂದು ದೈತ್ಯ ವಿಗ್ರಹ ಭಯಂಕರತೆಯನ್ನು ಶಿಲ್ಪೀಕರಿಸಿರುವ ಉತ್ತಮ ಕೃತಿ. ಹಿಮಾಚಲ ಪ್ರದೇಶ, ಮತ್ತು ಇತರ ಹಿಮಾಲಯದ ತಪ್ಪಲು ಭಾಗಗಲಲ್ಲಿ, ಈ ವೈಶಿಷ್ಟಗಳನ್ನು ಹೊಂದಿರುವ, ನೃತ್ಯಗಳಲ್ಲಿ ಉಪಯೋಗಿಸುವ ಮುಖವಾಡಗಳು ಹಾಗೂ ಗ್ರಾಮೀಣ ದೇವ ವಿಗ್ರಹಗಳು ಬಹುಸಂಖ್ಯೆಯಲ್ಲಿ ಕಂಡುಬರುತ್ತವೆ. ಭಾರತದ ಹಲವೆಡೆಗಳಲ್ಲಿ ಅದರಲ್ಲೂ ಹೆಚ್ಚಾಗಿ ಗುಜರಾತ್, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಈ ಸುತ್ತಿನಲ್ಲಿ ಹಿತ್ತಾಳೆಯಲ್ಲಿ ಮಾಡಿದ ಕುದುರೆಯ ಮೇಲೆ ಕುಳಿತ ಗಂಡುವಿಗ್ರಹಗಳನ್ನು ವಿಶೇಷವಾಗಿ ಕಾಣಬಹುದು. ಕುಲದವರ ಮೂಲಪುರಷರನ್ನು ಪ್ರತೀಕರಿಸುವ ಈ ವಿಗ್ರಹಗಳು ಶ್ರಾದ್ಧಕ್ರಿಯೆಯಲ್ಲಿ ಉಪಯೋಗಿಸುವಂಥವು. ತಮಿಳುನಾಡು ಮತ್ತು ಕೇರಳದಲ್ಲಿ ಸುಮಾರು ಇದೇ ರೀತಿಯ ಆದರೆ ಎತ್ತರದ ವಿಗ್ರಹಗಳನ್ನು ಗ್ರಾಮಗಳ ಸಮೀಪದಲ್ಲಿ ನಿಲ್ಲಿಸಿರುತ್ತಾರೆ. ಈ ವಿಗ್ರಹಗಳು ಅಯ್ಯಪ್ಪನ್ ಮತ್ತು ಅವನ ಅನುಚರ ಕರುಪ್ಪನ್ ದೇವರುಗಳವು. ಇವು ಸಾಮಾನ್ಯವಾಗಿ ಮಣ್ಣಿನಲ್ಲಿ ಮಾಡಿ ಉತ್ತಮವಾಗಿ ಬಣ್ಣ ಹಾಕಿದ ಬೃಹತ್ ವಿಗ್ರಹಗಳು. ದನಗಳಿಗೆ ಅಥವಾ ಜನಗಳಿಗೆ ಕಾಯಿಲೆ ಬಂದಾಗ, ಮಣ್ಣಿನಲ್ಲಿ ಆಯಾ ಪ್ರತಿಕೃತಿಗಳನ್ನು ಮಾಡಿ ಈ ದೇವರ ಬಳಿ ಇಡುವ ರೂಢಿ ಇದೆ. ಇಂಥ ನೂರಾರು ಬೊಂಬೆಗಳನ್ನು ಅಯ್ಯಪ್ಪನ್ ವಿಗ್ರಹಗಳ ಬಳಿ ಕಾಣಬಹುದು. ಇವುಗಳ ನಿರೂಪಣಾತಂತ್ರ ಗಮನಾರ್ಹ. ಇವು ನೋಡುಗರ ಮೇಲೆ ಬೀರುವ ಪ್ರಭಾವ ಅಸಾಧಾರಣವಾದುದು. ಅಯ್ಯಪ್ಪನ್ ಗ್ರಾಮರಕ್ಷಕ. ಇವನ ಮಹತ್ತ್ವ ಮತ್ತು ಶಕ್ತಿ. ಈ ಸಮೂಹಗಳಲ್ಲಿ ಕ್ರೋಡೀಕೃತ ರೂಪದಲ್ಲಿ ಎದ್ದು ಕಾಣುತ್ತದೆ.

	ಕರ್ನಾಟಕದಲ್ಲಿ ಜನಪದ ಶಿಲ್ಪಗಳ ಅಧ್ಯಯನ, ಜಾನಪದ ದೃಷ್ಟಿಯಿಂದಾಗಲಿ ಕಲಾ ಇತಿಹಾಸದ ದೃಷ್ಟಿಯಿಂದಾಗಲಿ ಹೊಸದಾಗಿ ಪ್ರಾರಂಭವಾಗಬೇಕಾಗಿದೆ. ಸದ್ಯಕ್ಕೆ ಕೆಲವು ಉದಾಹರಣೆಗಳನ್ನು ಮಾತ್ರ ಪಟ್ಟಿ ಮಾಡಬಹುದು. ತಮಿಳುನಾಡು ಮತ್ತು ಕೇರಳದ ರೀತಿಯ ಮಣ್ಣಿನ ಅಯ್ಯಪ್ಪನ್ ವಿಗ್ರಹಗಳು ಮತ್ತು ಅವಕ್ಕೆ ಅರ್ಪಿಸಿದ, ದನ, ನಾಯಿ ಮುಂತಾದ ಬೊಂಬೆಗಳು ಕೊಡಗು ಪ್ರದೇಶದಲ್ಲಿ ಇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಾರಾಧನೆಗೆ ಸಂಬಂಧಿಸಿದ ಹಿತ್ತಾಳೆಯ ಮುಖವಾಡಗಳು, ಆಯಾ ಭೂತದ ದೇವತೆಗಳ ಸ್ವರೂಪ ಕಲ್ಪನೆಗೆ ತಕ್ಕಂಥ ಭಾವಗಳನ್ನು ಬಹುಮಟ್ಟಿಗೆ ನಿರೂಪಿಸುತ್ತವೆ. ಇದೇ ಜಿಲ್ಲೆಯ ಮೆಕ್ಕಕಟ್ಟೆ ಎಂಬಲ್ಲಿನ ಮರದ ವಿಗ್ರಹಗಳು ಅಸಾಧಾರಣ ಕಲಾಕೃತಿಗಳು. ಮನುಷ್ಯ ಸ್ವಭಾವದಲ್ಲಿನ ಅನೇಕ ಮುಖಗಳು, ಅನೇಕ ಬಗೆಯ ಗುಣಸ್ವಭಾವಗಳು, ಪರಿಣಾಮಕಾರಿಯಾಗಿ ಶಿಲ್ಪರೂಪವನ್ನು ಧರಿಸಿ ನಿಂತಿವೆ. ಕರ್ನಾಟಕದ ಹಲವೆಡೆ ಮಾರಮ್ಮ ಇತ್ಯಾದಿ ಜನಪದ ದೇವತೆಗಳನ್ನು ಹಿತ್ತಾಳೆಯಲ್ಲಿ ಮಾಡುವ ರೂಢಿ ಇದೆ. ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿರುವಂಥ ಕುದುರೆಯ ಮೇಲೆ ಕುಳಿತ ಗಂಡುವಿಗ್ರಹಗಳನ್ನು ದಕ್ಷಿಣ ಕರ್ನಾಟಕದಲ್ಲೂ ಕಾಣಬಹುದು. ಇವನ್ನು ಬೀರೇದೇವರು ಎಂದು ಕರೆಯುತ್ತಾರೆ. ಇವು ಸಾಮಾನ್ಯವಾಗಿ ಹಿತ್ತಾಳೆಯಲ್ಲಿ ಮಾಡಿದವು. ಉತ್ತರ ಕರ್ನಾಟಕದ ಹಲವೆಡೆ ಮಾರಿಯಮ್ಮ, ಮರಗಮ್ಮ ಮುಂತಾದ ಮರದ ವಿಗ್ರಹಗಳು ಸಿಗುತ್ತವೆ. ಮಲೆನಾಡಿನಲ್ಲಿ ಬಳಕೆಯಲ್ಲಿರುವ ಮಾರಿಕಾಂಬಾ ವಿಗ್ರಹಗಳು ಹಾಗೂ ಗಡಿ ಮಾರಿ, ಉಡುಗೋಲಜ್ಜಿ, ಹಲ್ಲುಬೀರಿ, ಮುಂತಾದ ಶಿಲ್ಪಗಳನ್ನೂ, ವೀರಗಲ್ಲು ಮಾಸ್ತಿಕಲ್ಲು ಮುಂತಾದ ಶಿಲ್ಪಗಳನ್ನೂ, ಇಲ್ಲಿ ಸ್ಮರಿಸಬಹುದು. ಶಿಲ್ಪಕಲೆಯ ಯಾವ ನಿಯಮಗಳಿಗೂ ಯಾವ ಕಟ್ಟುಪಾಡುಗಳಿಗೂ ಯಾವ ವಿಧಿನಿಷೇಧಗಳಿಗೂ ಸ್ಪಂದಿಸದ ಅಪ್ಪಟ ಜನಪದ ಸೃಜನಶೀಲ ಶಕ್ತಿ ಕರ್ನಾಟಕದಾದ್ಯಂತ ವಿವಿಧ ರೂಪಗಳಲ್ಲಿ ಕಂಡುಬರುತ್ತದೆ. ಇವಲ್ಲದೆ ನಾಗರಿಕ ಸಂಪ್ರದಾಯಗಳಿಂದ ಬಂದ ಗಣೇಶ, ಗೌರಿ ಇತ್ಯಾದಿಗಳನ್ನು ಗ್ರಾಮೀಣರೇ ಮಾಡಿ ಉಪಯೋಗಿಸುವುದು ಕರ್ನಾಟಕದ ಹಲವೆಡೆಯಲ್ಲಿ ಕಂಡುಬರುತ್ತದೆ. ಇವೆಲ್ಲ ಧರ್ಮ, ಸಂಪ್ರದಾಯಗಳಿಗೆ ಸಂಬಂಧಿಸಿದ್ದಾದರೆ, ಮಕ್ಕಳ ವಿನೋದಕ್ಕಾಗಿ ಮಾಡಿದ, ಮರ ಅಥವಾ ಮಣ್ಣಿನ ಆಟಿಕೆಗಳು ಅದರಲ್ಲೂ ಬಸವ ಇತ್ಯಾದಿ ಪ್ರಾಣಿಗಳ ಬೊಂಬೆಗಳು, ಕಿಸುಕಾಲು ಬೊಂಬೆಗಳು, ಇವೂ ಬಹುಸಾಮಾನ್ಯವಾಗಿ ಕಂಡುಬರುವ ಜನಪದ ಶಿಲ್ಪಗಳು, ನವರಾತ್ರಿಯ ಕಾಲದಲ್ಲಿ ಈ ರೀತಿಯ ಅನೇಕ ಬೊಂಬೆಗಳನ್ನು ಇಟ್ಟು ಅಲಂಕರಿಸುವ ಸಂಪ್ರದಾಯ ಈ ನಾಡಿನಲ್ಲಿದೆ. ಇವಲ್ಲದೆ ಸೂತ್ರದ ಬೊಂಬೆ ಆಟದಲ್ಲಿ ಉಪಯೋಗಿಸುವ ಮರದ ಬೊಂಬೆಗಳು ಆಯಾ ಪ್ರದೇಶಗಳ ಉಡಿಗೆ-ತೊಡಿಗೆಗಳಿಂದ ಅಲಂಕೃತವಾಗಿದ್ದು, ಕೆಲವು ಉಚ್ಚತರ ಕಲಾಕೃತಿಗಳ ಮಟ್ಟಕ್ಕೆ ಏರಬಲ್ಲವಾಗಿವೆ.
 (ಎಸ್.ಎನ್.)
ಪರಿಷ್ಕರಣೆ:
ಕ್ಯಾರನಹಳ್ಳಿ ರಾಮಣ್ಣ